Exodus 5

ಅರಸನು ಮೋಶೆಯ ಮಾತನ್ನು ಲಕ್ಷಿಸದೆ ಹೋದದ್ದು

1ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಹೋಗಿ, <<ಇಸ್ರಾಯೇಲರ ದೇವರಾದ ಯೆಹೋವನು, ನನ್ನ ಜನರು ನನಗಾಗಿ ಅರಣ್ಯದೊಳಗೆ ಜಾತ್ರೆ ನಡೆಸುವಂತೆ ಅವರಿಗೆ ಅಪ್ಪಣೆ ಕೊಡಬೇಕು ಎಂದು ಹೇಳಿದ್ದಾನೆ>> ಅಂದರು. 2ಅದಕ್ಕೆ ಫರೋಹನು, <<ಯೆಹೋವನೆಂಬುವವನು ಯಾರು ? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲರನ್ನು ಹೋಗಗೊಡಿಸುವುದೇತಕ್ಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ, ಇಸ್ರಾಯೇಲರನ್ನು ಹೋಗಲು ನಾನು ಬಿಡುವುದೇ ಇಲ್ಲ>> ಅಂದನು.

3ಆಗ ಅವರು, <<ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡನು. ಅಪ್ಪಣೆಯಾದರೆ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣಮಾಡಿ, ನಮ್ಮ ದೇವರಾದ ಯೆಹೋವನಿಗೋಸ್ಕರ ಯಜ್ಞಮಾಡಿ ಬರುವೆವು. ಇಲ್ಲವಾದರೆ ಆತನು ನಮ್ಮನ್ನು ವ್ಯಾಧಿಯಿಂದಾದರೂ, ಕತ್ತಿಯಿಂದಾದರೂ ಸಂಹಾರಮಾಡುವನು>> ಎಂದು ಹೇಳಿದರು.

4ಐಗುಪ್ತರ ಅರಸನು ಅವರಿಗೆ, <<ಮೋಶೆ ಮತ್ತು ಆರೋನರೇ, ಈ ಜನರು ತಮ್ಮ ಕೆಲಸವನ್ನು ಮಾಡದಂತೆ ಯಾಕೆ ಅಡ್ಡಿ ಮಾಡುತ್ತೀರಿ? ನಿಮ್ಮ ಬಿಟ್ಟೀ ಕೆಲಸಕ್ಕೆ ಹೋಗಿರಿ>> ಎಂದು ಹೇಳಿದನು. 5ಫರೋಹನು, <<ಇಬ್ರಿಯರು ದೇಶದಲ್ಲಿ ಹೆಚ್ಚಾಗಿದ್ದಾರೆ. ಅವರು ತಮ್ಮ ಬಿಟ್ಟೀ ಕೆಲಸಗಳನ್ನು ಮಾಡದಂತೆ ನಿಲ್ಲಿಸಿ ಬಿಡುತ್ತಿದ್ದೀರಲ್ಲಾ?>> ಎಂದನು.

6ಆ ದಿನದಲ್ಲಿ ಫರೋಹನು ಬಿಟ್ಟೀಮಾಡಿಸುವವರನ್ನು ಮತ್ತು ಅವರ ಅಧಿಕಾರಿಗಳನ್ನು ಕರೆಯಿಸಿ, 7<<ಇನ್ನು ಮೇಲೆ ನೀವು ಆ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಬಾರದು. ಅವರೇ ಹೋಗಿ ಹುಲ್ಲನ್ನು ಶೇಖರಿಸಿಕೊಳ್ಳಲಿ, 8ಆದರೂ ಅವರು ಈವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆಯಾಗಬಾರದು ಎಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ, ಆದುದರಿಂದಲೇ ಅವರು, <ನಾವು ಹೋಗಿ ನಮ್ಮ ದೇವರಿಗೆ ಯಜ್ಞಮಾಡಿ ಬರುವುದಕ್ಕೆ ಅಪ್ಪಣೆಯಾಗಬೇಕು> ಎಂದು ಕೂಗಿಕೊಳ್ಳುತ್ತಿದ್ದಾರೆ. 9ಈ ಜನರು ವ್ಯರ್ಥವಾದ ಮಾತುಗಳಿಗೆ ಗಮನ ಕೊಡದಂತೆ ನೀವು ಅವರ ಮೇಲೆ ಹೆಚ್ಚು ಕೆಲಸವನ್ನು ಹೊರಿಸಿರಿ. ಅವರು ದುಡಿಯಲಿ>> ಎಂದು ಆಜ್ಞಾಪಿಸಿದನು.

ಐಗುಪ್ತ್ಯರು ಇಸ್ರಾಯೇಲರನ್ನು ಹೆಚ್ಚಾಗಿ ಬಾಧಿಸಿದ್ದು

10ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಮತ್ತು ಅಧಿಕಾರಿಗಳೂ ಹೊರಗೆ ಹೋಗಿ ಆ ಜನರಿಗೆ, <<ನಿಮಗೆ ಹುಲ್ಲನ್ನು ಕೊಡಬಾರದೆಂದು ಫರೋಹನ ಅಪ್ಪಣೆಯಾಗಿದೆ. 11ನಿಮಗೆ ಹುಲ್ಲು ಎಲ್ಲಿ ದೊರಕುವುದೋ ಅಲ್ಲಿಗೆ ನೀವೇ ಹೋಗಿ ತೆಗೆದುಕೊಳ್ಳಿರಿ. ಆದರೂ ನೀವು ಮಾಡಬೇಕಾದ ಕೆಲಸದಲ್ಲಿ ಸ್ವಲ್ಪವೂ ಕಡಿಮೆಯಾಗಬಾರದು>> ಎಂದು ಹೇಳಿದರು.

12ಹೀಗಿರಲಾಗಿ ಜನರು ಹುಲ್ಲನ್ನು ಕೂಡಿಸಿಕೊಳ್ಳುವುದಕ್ಕಾಗಿ ಐಗುಪ್ತ ದೇಶದಲ್ಲೆಲ್ಲಾ ಚದರಿಹೋಗಿ ಹುಡುಕತೊಡಗಿದರು. 13ಇದಲ್ಲದೆ ಬಿಟ್ಟೀ ಕೆಲಸ ಮಾಡಿಸುವವರು, <<ನಿಮಗೆ ಹುಲ್ಲು ಇದ್ದಾಗ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಅದೇ ದಿನದಲ್ಲೇ ಮುಗಿಸಬೇಕು>> ಎಂದು ಹೇಳಿ ಅವರನ್ನು ಅವಸರ ಪಡಿಸಿದರು. 14ಫರೋಹನ ಅಧಿಕಾರಿಗಳು ತಾವೇ ನೇಮಿಸಿದ ಇಸ್ರಾಯೇಲರ ಮೇಲ್ವಿಚಾರಕರಿಗೆ, <<ನೀವು ಮೊದಲುಇಟ್ಟಿಗೆಗಳ ಲೆಕ್ಕ ಒಪ್ಪಿಸುತ್ತಿದ್ದಂತೆ ನಿನ್ನೆ ಹಾಗೂ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ>> ಎಂದು ಹೇಳಿ ಅವರನ್ನು ಹೊಡೆದರು.

15ಹೀಗಿರಲು ಇಸ್ರಾಯೇಲರ ಮೇಲ್ವಿಚಾರಕರು ಫರೋಹನ ಬಳಿಗೆ ಹೋಗಿ, <<ಏಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತಿರುವಿರಿ ಸ್ವಾಮೀ? 16ನಿನ್ನ ದಾಸರಿಗೆ, ನೇಮಿಸಿದ ಅಧಿಕಾರಿಗಳು ಹುಲ್ಲನ್ನು ಕೊಡದೆ <ಇಟ್ಟಿಗೆಗಳನ್ನು ಮಾಡಿರಿ!> ಎಂದು ಹೇಳುತ್ತಾ ನಮ್ಮನ್ನು ಹೊಡೆಯುತ್ತಿದ್ದಾರೆ. ಹೀಗೆ ನಿನ್ನ ಜನರು ಮಾಡುತ್ತಿರುವುದು ಪಾಪಕಾರ್ಯವಾಗಿದೆ>> ಎಂದು ಗೋಳಾಡಿದರು. 17ಅದಕ್ಕೆ ಅವನು, <<ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ, <ನಾವು ಹೋಗಿ ಯೆಹೋವನಿಗೆ ಯಜ್ಞವನ್ನರ್ಪಿಸಿ ಬರಬೇಕು> ಎಂದು ಹೇಳುತ್ತಿದ್ದೀರಿ. 18ಆದ್ದರಿಂದ ಈಗ ಕೆಲಸಕ್ಕೆ ನಡೆಯಿರಿ ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೂ ನೇಮಿಸಿದ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಬೇಕು>> ಅಂದನು.

19ದಿನ ದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂಬ ಅಪ್ಪಣೆಯಾಗಿದ್ದರಿಂದ ಇಸ್ರಾಯೇಲರ ಮೇಲ್ವಿಚಾರಕರು ತಾವು ದುರವಸ್ಥೆಯಲ್ಲಿ ಸಿಕ್ಕಿಕೊಂಡಿವೆಂದು ತಿಳಿದುಕೊಂಡರು. 20ಅವರು ಫರೋಹನ ಬಳಿಯಿಂದ ಹೊರಗೆ ಬಂದಾಗ ತಮ್ಮನ್ನು ಎದುರುಗೊಳ್ಳುವುದಕ್ಕೆ ನಿಂತಿದ್ದ ಮೋಶೆ ಮತ್ತು ಆರೋನರನ್ನು ನೋಡಿ 21ಮೋಶೆ ಹಾಗು ಆರೋನರಿಗೆ, <<ಯೆಹೋವನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ. ಏಕೆಂದರೆ ಫರೋಹನು ಮತ್ತು ಅವನ ಸೇವಕರೂ ನಮ್ಮನ್ನು ನೋಡಿ ಅಸಹ್ಯಪಡುವಂತೆ ನೀವು ಮಾಡಿರುವಿರಿ. ನಮ್ಮನ್ನು ಸಂಹಾರಮಾಡುವುದಕ್ಕೆ ಅವರ ಕೈಗೆ ಕತ್ತಿಯನ್ನು ಕೊಟ್ಟಿದ್ದೀರಿ>> ಅಂದರು. <<ಯೆಹೋವನು ನಿಮ್ಮ ತಪ್ಪನ್ನು ವಿಚಾರಿಸಿ ತಕ್ಕ ಶಿಕ್ಷೆಯನ್ನು ವಿಧಿಸಲಿ>> ಎಂದು ಹೇಳಿದರು.

ದೇವರು ಮೋಶೆಯನ್ನು ಧೈರ್ಯಪಡಿಸಿದ್ದು

22ಆಗ ಮೋಶೆಯು ಯೆಹೋವನ ಬಳಿಗೆ ಹಿಂತಿರುಗಿ ಬಂದು, <<ಸ್ವಾಮೀ, ಈ ಜನರಿಗೆ ಕೇಡನ್ನು ಮಾಡಿದ್ದೀಯಲ್ಲಾ? ನನ್ನನ್ನು ಕಳುಹಿಸಿದ್ದು ಯಾಕೆ? ನಾನು ಫರೋಹನ ಬಳಿಗೆ ಹೋಗಿ ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀನು ನಿನ್ನ ಜನರನ್ನು ಎಷ್ಟು ಮಾತ್ರವೂ ತಪ್ಪಿಸಲಿಲ್ಲವಲ್ಲ>> ಎಂದು ಹೇಳಿದನು.

23

Copyright information for KanULB